image

CHITRA VIHARA

ಚಿತ್ರವಿಹಾರ

ಅಕ್ಷರಾಭಿನಂದನ


ಅಕ್ಷರಗಳ ಮುಖಾಂತರ ತಮ್ಮ ಅಭಿನಂದನೆಗಳನ್ನು ಸಲ್ಲಿಸುವ ಪರಂಪರೆಯು ಕನ್ನಡ ಸಾಹಿತ್ಯದಲ್ಲಿ ಒಂದು ವಿಶೇಷ ಮಾರ್ಗವಾಗಿದೆ.

ಕನ್ನಡದ ಕಣ್ವ, ನವೋದಯ ಸಾಹಿತ್ಯದ ಪ್ರವರ್ತಕ ಪ್ರೊ: ಬಿ.ಎಂ.ಶ್ರೀ ಅವರಿಗೆ ಸಲ್ಲಿಸಿರುವ ‘ಸಂಭಾವನೆ ಅಭಿನಂದನಾ ಗ್ರಂಥವು ಕನ್ನಡದ ಮೊದಲನೇ ಗ್ರಂಥವಾಗಿದೆ. ಅದು ಸರಿ ಸುಮಾರು ಎಂಬತ್ತು ವರ್ಷಗಳ ಹಿಂದಿನ ಪ್ರಕಟಣೆಯಾಗಿದೆ.

ಈ ವಿಶಿಷ್ಟ ಪರಂಪರೆ ಇಂದಿಗೂ ಸಾಗಿ ಬಂದಿರುವುದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯೆಂದೇ ಪರಿಗಣಿಸಲಾಗುತ್ತದೆ. ಅಭಿನಂದನಾ ಗ್ರಂಥವು ಒಬ್ಬ ಸಾಧಕನ ಬದುಕು, ಸಾಧನೆ, ಸೇವೆ, ಪ್ರತಿಭೆ, ಬುದ್ದಿಮತ್ತೆ ಒಳಗೊಂಡಂತೆ ಆದರ್ಶವನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವೇ ಆಗಿರುತ್ತದೆ.

ಜೀವನ ಚರಿತ್ರೆಯು ಒಬ್ಬ ವ್ಯಕ್ತಿಯ ಕುರಿತು ಮತೊಬ್ಬ ವ್ಯಕ್ತಿ ಕಂಡು ಅರಿತ ವಿಷಯಗಳೇ ಬರವಣಿಗೆಗೆ ಸೀಮಿತವಾಗಿರುತ್ತದೆ. ಆದರೆ ಅಭಿನಂದನಾ ಗ್ರಂಥದಲ್ಲಿ ಒಬ್ಬ ಸಾಧಕನನ್ನು ಕುರಿತು ಅನೇಕರು ತಮ್ಮ ಅಭಿಪ್ರಾಯಗಳನ್ನು , ಮೆಚ್ಚುಗೆಯನ್ನು , ಆದರ್ಶವನ್ನು ಹೊರತೆಗೆದು ಪರಿಚಯಿಸುವ ಕಾರ್ಯವೇ ಆಗಿರುತ್ತದೆ.

ಆದುದರಿಂದ, ಈ ಪ್ರಕಾರವು ನೂರಾರು ದನಿಗಳ ಮಾರ್ದನಿಯ ಸಂಗಮವೇ ಆಗಿರುತ್ತದೆ. ‘ ಮುತ್ತಿನ ಹಾರ ಡಾ: ಸಿ. ಸೋಮಶೇಖರ್‌ರವರಿಗೆ ಸಲ್ಲಿಸುತ್ತಿರುವ ಅಭಿನಂದನಾ ಗ್ರಂಥ. ಬಸವಣ್ಣನವರು; ಮಾತಿನಲ್ಲಿ ಮುತ್ತಿನಹಾರವನ್ನು ಕಂಡಿದ್ದಾರೆ. ‘ ನುಡಿದರೆ ಮುತ್ತಿನಹಾರದಂತಿರಬೇಕು ಎಂದು ತಮ್ಮ ವಚನದಲ್ಲಿ ತಿಳಿಸಿದ್ದಾರೆ.

ಆಡುವ ಮಾತು ಮುತ್ತಿನ ಮೌಲ್ಯದಿಂದ ಕೂಡಿರಬೇಕು. ಮುತ್ತಿನ ಹಾರದಂತೆ ಅನುಕ್ರಮವಾಗಿ ಪೋಣಿಸಿದ ಆಭರಣದಂತಿರಬೇಕು ಎಂಬ ಕಠಿಣ ಕಲೆಯ ಸೂಚನೆ ಇದಾಗಿದೆ. ಮಾತಿನ ಮಹತ್ವವನ್ನು ಸೂಚ್ಯವಾಗಿ ತಿಳಿಸುತ್ತದೆ. ಮುಂದುವರೆದಂತೆ, ಆಡುವ ಮಾತು ಶಿವನೇ ಮೆಚ್ಚಿ ಹೌದು ಹೌದೆನ ಬೇಕು ಎಂಬ ಸತ್ಯದ ಶಿಖರವೇ ಈ ಮಾತಿನ ಹಿಂದೆ ಅಡಗಿದೆ.

ಮುತ್ತಿನಹಾರ ಶೀರ್ಷಿಕೆಯು ಡಾ: ಸಿ. ಸೋಮಶೇಖರರ ನಡೆ ನುಡಿಗಳ ನಡುವೆ ನಿಲ್ಲುವ ಒಂದು ಸುಂದರವಾದ ಆಪ್ತ ಪ್ರತಿಮೆ. ಡಾ: ಸಿ. ಸೋಮಶೇಖರರು ಬಾಲ್ಯದಿಂದಲೇ ಮಾತಿನ ಒಟ್ಟಿಗೆ ಬೆಳೆದು ಬಂದವರು. ಅವರ ವಿದ್ಯಾರ್ಥಿ ಜೀವನದಲ್ಲಿ ಭಾಗವಹಿಸಿ ವಿಜೇತರಾಗಿರುವ ಚರ್ಚಾಸ್ಪಧೆಗಳೇ ಅದಕ್ಕೆ ಸಾಕ್ಷಿ.

ಉತ್ತಮ ವಿದ್ಯಾರ್ಥಿಯಾಗಿ ಹುಟ್ಟೂರು ಹೊಸಕೋಟೆಗೆ ಕೀರ್ತಿ ತಂದವರು. ಅಧ್ಯಾಪಕರಾಗಿ, ಸರ್ಕಾರಿ ಅಧಿಕಾರಿಯಾಗಿ ಹಂತ ಹಂತವಾಗಿ ಸಾಧನೆಯ ಶಿಖರ ಹತ್ತಿದವರು. ಆದುದರಿಂದ ಅವರ ಸ್ನೇಹ - ಸಂಬಂಧಗಳ ಹರವು ತುಂಬಾ ವಿಶಾಲವಾದದ್ದು. ಅವರಿಗೆ ನಾಡಿನ ಮೂಲೆ ಮೂಲೆಯಲ್ಲೂ ಅಭಿಮಾನದ ಬಳಗವಿದೆ. ಡಾ: ಸಿ. ಸೋಮಶೇಖರರು ಎಂದೂ ಅಧಿಕಾರದ ಅಮಲಿನಲ್ಲಿ ಉಳಿದವರಲ್ಲ. ಅವರ ವಿನಯ , ಅದಕ್ಕೆ ಪೂರಕವಾದ ಸಹಾಯ ಹಸ್ತ . ಇದು ದೊಡ್ಡ ಬಳಗ ನಿರ್ಮಾಣವಾಗಲು ನೆರವಾಗಿದೆ.

ಜನಸಾಮಾನ್ಯರಿಂದ ಅತ್ಯುನ್ನತ ಪ್ರಜೆಯವರೆಗೂ ಅವರ ಒಡನಾಟ ನಿರಂತರವಾದದ್ದು. ಆದುದರಿಂದ ‘ಮುತ್ತಿನ ಹಾರ ದಂತಹ ನಾಲ್ಕಾರು ಅಭಿನಂದನಾ ಗ್ರಂಥಗಳಿಗೆ ಬೇಕಾದಷ್ಟು ಬರವಣಿಗೆಗಳ ಮಹಾಪೂರವೇ ಹರಿದುಬಂದಿದೆ. ಇವರಿಗೆ ಮೌಖಿಕ ಅಭಿನಂದನೆ ಸಲ್ಲಿಸುವ ನಿರಕ್ಷರ ಕುಕ್ಷಿಗಳ ದೊಡ್ಡ ಬಳಗವೂ ಇದೆ ಅಂತಹವರ ಅಂತ:ಕರಣವನ್ನು ಸೋಮಶೇಖರರು ತಲುಪಿದ್ದಾರೆ ಎಂಬುದು ಅತಿಶಯೋಕ್ತಿಯಲ್ಲ.

ನಾಡಿನ ಹಿರಿಯ ಸಾಹಿತಿಗಳು, ಕಲಾವಿದರು, ಆಪ್ತರು, ಅಧಿಕಾರಿಗಳು, ಮುತ್ಸದ್ಧಿಗಳು.. ಹೀಗೆ ಎಲ್ಲ ಕ್ಷೇತ್ರಗಳಿಂದ ಅಭಿಮಾನದ ಲೇಖನಗಳು ಇಲ್ಲಿ ಸಂಗಮಿಸಿವೆ. ಈ ಗ್ರಂಥದಲ್ಲಿ ಅವರನ್ನು ಕುರಿತಾದ ಕವನಗಳಿವೆ, ಹಾಡುಗಳಿವೆ, ಲೇಖನಗಳಿವೆ, ಚಿತ್ರಗಳಿವೆ, ಸಲಿಗೆಯ ಮಾತುಗಳಿವೆ , ಗಂಭೀರ ವಿಚಾರಗಳ ಸಂವಾದವಿದೆ, ಆಯ್ದ ವಚನಗಳಿವೆ. ವೈವಿಧಮಯ ಭಾವನೆಗಳ ಬೆಚ್ಚನೆಯ ಗೂಡು ಇದಾಗಿದೆ.

‘ಮುತ್ತಿನಹಾರ ದ ಮುಂದುವರೆದ ಭಾಗವಾಗಿ ಚಿತ್ರವಿಹಾರ ಮೂಡಿಬಂದಿವೆ. ಸೋಮಶೇಖರರ ಸಂಕ್ಷಿಪ್ತ ಜೀವನ, ಚರಿತ್ರೆ ಹಾಗೂ ಅನೇಕ ವಿಶೇಷ ಸಂದರ್ಭಗಳಲ್ಲಿ ಗಣ್ಯರೊಟ್ಟಿಗೆ ಪಾಲ್ಗೊಂಡಿರುವ ಸಚಿತ್ರ ದರ್ಶನ ಕಣ್ಣುಗಳಿಗೆ ಮುದನೀಡುವಂತಿದೆ.

ಸಮಯೋಚಿತವಾಗಿ ಲೇಖನಗಳನ್ನು ನೀಡಿರುವ ಲೇಖಕರಿಗೆ , ಈ ಗ್ರಂಥವು ಮುದ್ರಣಗೊಂಡು ಕೈಸೇರಲು ಶ್ರಮಿಸಿದವರಿಗೆ ಅನಂತ ಕೃತಜ್ಞ್ಞತೆಗಳು.

-ಜರಗನಹಳ್ಳಿ ಶಿವಶಂಕರ್

main-img
main-img
main-img
main-img
main-img